*ಇಳಕಲ್ ವೆಂಕಟೇಶ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ*
ಇಳಕಲ್ ಬ್ರಾಹ್ಮಣ ಸಮಾಜವು ಇಲ್ಲಿಯ ಶ್ರೀವೆಂಕಟೇಶ ದೇವಸ್ಥಾನದಲ್ಲಿ ಈ ವರ್ಷದ ನವರಾತ್ರಿಯನ್ನು ವಿಜ್ರಂಭಣೆಯಿಂದ ಆಚರಿಸಲಿದೆಯೆಂದು ಸಮಾಜದ ಅಧ್ಯಕ್ಷರಾದ ಪಾಂಡುರಂಗ ಕುಲಕರ್ಣಿ, ಕಾರ್ಯದರ್ಶಿ ಗಿರಿಧರ ದೇಸಾಯಿ ಹಾಗೂ ಹಿರಿಯ ಅರ್ಚಕರಾದ ನಾರಾಯಣಾಚಾರ್ಯ ಪೂಜಾರ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಂದು ಬೆಳಿಗ್ಗೆ ನಂದಾದೀಪ ಸ್ಥಾಪಿಸುವ ಮೂಲಕ ನವರಾತ್ರೋತ್ಸವ ಆರಂಭವಾಗುವುದು. ಈ ವರ್ಷ ಹತ್ತು ದಿನಗಳ ಕಾಲ ಉತ್ಸವವು ಜರುಗಿ ಅಕ್ಟೋಬರ್ 2ರಂದು ಸೀಮೋಲ್ಲಂಘನ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 3ರಂದು ಅವಬೃಥ ಸ್ನಾನಕ್ಕಾಗಿ ಉತ್ಸವ ಮೂರ್ತಿಗಳನ್ನು ಹೊಸೂರಿಗೆ ಕರೆದೊಯ್ಯಲಾಗುವುದು.
ಪ್ರತಿದಿನವೂ ಕಾಕಡಾರತಿ, ವೆಂಕಟೇಶ ಕಲ್ಯಾಣ ಪಾರಾಯಣ, ಪಲ್ಲಕ್ಕಿ ಉತ್ಸವ, ರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಗುವುದು. ಸಂಗೀತ, ಹರಟೆ, ಪ್ರವಚನ, ರಸಪ್ರಶ್ನೆ, ಏಕ್ ಮಿನಿಟ್, ರಂಗವಲ್ಲಿ ಸ್ಪರ್ಧೆ, ದಾಸರ ಹಾಡುಗಳ ಸ್ಪರ್ಧೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ಹ್ಮಿಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.