ಬೆಂಗಳೂರಿನಲ್ಲಿ ʼನನ್ನ ಮೊದಲ ಮತ ದೇಶಕ್ಕಾಗಿʼ ಅಭಿಯಾನ
ಬೆಂಗಳೂರು : ಮೊದಲ ಬಾರಿ ಮತದಾರರಾಗಿರುವ ಯುವ ಜನತೆಯಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ʼನನ್ನ ಮೊದಲ ಮತ ದೇಶಕ್ಕಾಗಿʼ ಅಭಿಯಾನವನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಇದರ ಅಂಗವಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕ ಬೆಂಗಳೂರಿನಲ್ಲಿ ಅಭಿಯಾನ ಹಮ್ಮಿಕೊಂಡಿತ್ತು. ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತದಾನದ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿದ್ಯಾರ್ಥಿನಿ ಸುಷ್ಮಿತಾ ಕೆ ಮಾತನಾಡಿ, ನನ್ನ ದೇಶದ ಒಳಿತಿಗಾಗಿ ನನ್ನ ಮೊದಲ ಮತವನ್ನು ಚಲಾಯಿಸಲು ನನಗೆ ತುಂಬಾ ಸಂತೋಷವಾಗುತ್ತದೆ. ನಾವು ಮತದಾನ ಮಾಡದಿದ್ದರೆ ನಾವು ಇತಿಹಾಸವನ್ನು ನಿರ್ಲಕ್ಷಿಸಿ ಭವಿಷ್ಯವನ್ನು ಬಿಟ್ಟುಕೊಟ್ಟಂತಾಗುತ್ತದೆ, ಆದ್ದರಿಂದ ಎಲ್ಲ ಮೊದಲ ಬಾರಿಯ ಮತದಾರರು ಮತ ಚಲಾಯಿಸಬೇಕು ಎಂದು ಹೇಳಿದರು.
ʼನಿಮಗೆಲ್ಲರಿಗೂ ತಿಳಿದಿರುವಂತೆ ಮತವು ಬುಲೆಟ್ ಗಿಂತ ಶಕ್ತಿಯುತವಾದುದುʼ ಎಂದು ವಿದ್ಯಾರ್ಥಿ ನಾಗಾರ್ಜುನ್ ಹೇಳಿದರು. ʼಉತ್ತಮ ಪ್ರಜೆಗಳು ಮತದಾನ ಮಾಡದಿದ್ದರೆ ಕೆಟ್ಟ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ, ಆದ್ದರಿಂದ ಈ ದೇಶದ ಎಲ್ಲಾ ಯುವಜನರು ದೇಶದ ಒಳಿತಿಗಾಗಿ ಮತ ಚಲಾಯಿಸಬೇಕು, ಅದು ಈ ದೇಶದ ಯುವಕರಾದ ನಮ್ಮ ಜವಾಬ್ದಾರಿಯಾಗಿದೆʼ ಎಂದು ಅವರು ಹೇಳಿದರು.
ಮತ್ತೊಬ್ಬ ವಿದ್ಯಾರ್ಥಿನಿ ಪವಿತ್ರಾ ಮಾತನಾಡಿ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಮೊದಲ ಬಾರಿಗೆ ಮತದಾರಳಾದ ನನಗೆ ಒಂದು ಸೌಭಾಗ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಮೊದಲ ಬಾರಿಗೆ ಮತದಾರರೊಂದಿಗೆ ನನ್ನ ಧ್ವನಿಯೂ ಕೇಳಿಬರುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಪ್ರಯಾಣವನ್ನು ಮುಂದುವರಿಸಲು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನನ್ನ ಹಕ್ಕನ್ನು ಚಲಾಯಿಸಲು ನಾನು ಬದ್ಧಳಾಗಿದ್ದೇನೆ ಎಂದು ಹೇಳಿದರು.
****