ಪರಿಶಿಷ್ಟ ಜಾತಿ ಸಮುದಾಯದ ಹಿತರಕ್ಷಣೆ: ಕಾರ್ಯದರ್ಶಿಗಳ ಸಮಿತಿಯನ್ನು ಭೇಟಿ ಮಾಡಿದ ಕರ್ನಾಟಕದ ನಿಯೋಗ
ನವದೆಹಲಿ: ಸರ್ಕಾರದ ಪ್ರಯೋಜನಗಳಿಂದ ವಂಚಿತ ವರ್ಗವನ್ನು ಪ್ರತಿನಿಧಿಸುವ ಮಾದಿಗರು ಮತ್ತು ಅಂತಹ ಇತರ ಪರಿಶಿಷ್ಟ ಜಾತಿ ಸಮುದಾಯಗಳ ಹಿತಾಸಕ್ತಿಗಳನ್ನು ರಕ್ಷಿಸಲು ಕೈಗೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿಗಳ ಸಮಿತಿಯನ್ನು ರಚಿಸಲಾಗಿದೆ.
ಕಾರ್ಯದರ್ಶಿಗಳ ಸಮಿತಿಯ ಎರಡನೇ ಸಭೆ ನಡೆಸಲಾಯಿತು. ಸಮಿತಿಯು ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಮಾದಿಗ ಸಮುದಾಯದ ನಿಯೋಗವನ್ನು ಭೇಟಿ ಮಾಡಿತು.
ಕಾರ್ಯದರ್ಶಿಗಳ ಸಮಿತಿಯನ್ನು ರಚಿಸಿದ್ದಕ್ಕಾಗಿ ನಿಯೋಗವು ಪ್ರಧಾನಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿತು.
ಮಾದಿಗ ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳು ಮತ್ತು ಅವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ನಿಯೋಗವು ಸಮಿತಿಗೆ ಮಾಹಿತಿ ನೀಡಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳು ಮಾದಿಗ ಮತ್ತು ಇತರ ಸಮಾನ ಸ್ಥಾನದಲ್ಲಿರುವ ಸಮುದಾಯಗಳ ಸದಸ್ಯರಿಗೆ ಸಮಾನವಾಗಿ ಲಭ್ಯವಾಗುವಂತೆ ಭಾರತ ಸರ್ಕಾರ ಖಾತರಿಪಡಿಸಬೇಕು ಎಂದು ನಿಯೋಗದ ಸದಸ್ಯರು ಮನವಿ ಮಾಡಿದರು.
ನಿಯೋಗವು ಎತ್ತಿದ ಕಳವಳಗಳನ್ನು ಸಮಿತಿಯು ಗಮನಿಸಿತು. ಸಮಾಜದ ವಿವಿಧ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳನ್ನು ಸರ್ಕಾರ ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂದು ಸಮಿತಿಯು ನಿಯೋಗಕ್ಕೆ ಮಾಹಿತಿ ನೀಡಿತು. ಅಲ್ಲದೆ, ನಿಯೋಗ ಎತ್ತಿದ ಸಮಸ್ಯೆಗಳನ್ನು ಪರಿಶೀಲಿಸಿ, ಅಗತ್ಯ ಅನುಸರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿತು.
*****