ಶ್ರೀ ವಾಲ್ಮೀಕಿ ಜಯಂತಿಯಲ್ಲಿ ಸಚಿವ ಡಿ.ಸುಧಾಕರ್ ಅಭಿಮತ
ರಾಮಾಯಣ ಸಾರ್ವಕಾಲಕ್ಕೂ ಪೂಜನೀಯ ಮಹಾಕಾವ್ಯ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಅ.07:
ಇಡೀ ವಿಶ್ವವೇ ಬಯಸುವ ಸ್ವಾತಂತ್ರö್ಯ, ಸಮಾನತೆ, ಸಹೋದರತೆಯ ತತ್ವವನ್ನು ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವಕ್ಕೆ ಸಾರಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ತತ್ವಜ್ಞಾನಿಯಾಗಿ ಮಾನವೀಯ ಮೌಲ್ಯಗಳ ಹರಿಕಾರನಾಗಿ ಕಾಣುತ್ತಾರೆ. ಇವರ ಜೀವನವೇ ಪ್ರಗತಿಯ ಹಾದಿಯಲ್ಲಿ ಹಾಗೂ ಅರಿವಿನ ಮಾರ್ಗದಲ್ಲಿ ಸಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣ ಸರ್ವಕಾಲಕ್ಕೂ ಪೂಜ್ಯನೀಯ ಮಹಾಕಾವ್ಯ. ರತ್ನಾಕರನ ಬದುಕಿನಲ್ಲಿ ಮಹತ್ತರವಾದ ತಿರುವೆಂದರೆ ಬೇಟೆಯಿಂದಾಗುವ ಹಿಂಸೆ-ನೋವು-ವಿಷಾದ ಇವುಗಳಿಂದಾದ ಪರಿಣಾಮಗಳು ಅವರ ಮನಃಪರಿವರ್ತನೆಗೆ ಕಾರಣವಾದವು. ಶ್ರೀ ವಾಲ್ಮೀಕಿ ರಾಮಾಯಣದ ಪ್ರೇರಣೆಯಿಂದಾಗಿ ಇಂದು ಜಗತ್ತಿನಲ್ಲಿ 6,000 ರಾಮಾಯಣಗಳನ್ನು ರಚಿಸಲಾಗಿದೆ. ಅನೇಕ ಭಾರತೀಯ ಭಾಷೆಗಳಲ್ಲಿ ಹಾಗೂ ಜರ್ಮನಿ, ಇಟಲಿ, ಪ್ರೆಂಚ್, ಇಂಗ್ಲಿಷ್ ಇನ್ನೂ ಮೊದಲಾದ ಭಾಷೆಗಳಲ್ಲಿ ರಾಮಾಯಣಗಳು ರಚನೆಯಾಗಿವೆ ಎಂದು ಹೇಳಿದರು.
ಪುರಾಣ ಪುರುಷ ಬೇಡರ ಕಣ್ಣಪ್ಪನು ಶಿವನಿಗೆ ಕಣ್ಣುಗಳನ್ನು ನೀಡಿದ ಮಹಾನ್ ವ್ಯಕ್ತಿ. ತನ್ನ ಹೆಬ್ಬೆರಳನ್ನೇ ಗುರು ಕಾಣಿಕೆಯಾಗಿ ದ್ರೋಣಾಚಾರ್ಯನಿಗೆ ನೀಡಿದ ಅಮಾಯಕ ಬೇಡ ಯುವಕ ಏಕಲವ್ಯ, ಶ್ರೀರಾಮನಿಗಾಗಿ ಕಾದು ಕುಳಿತು ಹಣ್ಣುಗಳನ್ನು ನೀಡಿದ ಮುಗ್ದೆ ಶಬರಿ, ಅಷ್ಠೇ ಅಲ್ಲ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಬೇಡ ಜನಾಂಗದ ಕೊಡುಗೆ ಸ್ಮರಣೀಯ. ಮೌರ್ಯರ ಕಾಲದಿಂದ ಹಿಡಿದು ವಿಜಯನಗರ ಕಾಲದವರೆಗೆ ಬೇಡರು ರಕ್ಷಣಾಕಾರ್ಯ, ಅಧೀನಾಧಿಕಾರಿಗಳಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದರು. ಆದರೆ ಇವರ ನಿಷ್ಠೆಯನ್ನು ಪರಿಗಣಿಸಿ ಯಾವ ಸಾಮ್ರಾಟರು ಇವರನ್ನು ಪ್ರಾಂತ್ಯದ ಪಾಳೆಯಗಾರರನ್ನಾಗಿ ನೇಮಿಸುತ್ತಿರಲಿಲ್ಲ. ಬದಲಾಗಿ ಪರಿಶ್ರಮ ಮತ್ತು ಸ್ವಂತ ಬಲದಿಂದ ರೂಪುಗೊಂಡ ಪಾಳೆಯಗಾರನಿಗೆ ಮಾನ್ಯತೆ ನೀಡಿ ಕಪ್ಪು-ಕಾಣಿಕೆ ಪಡೆಯುತ್ತಿದ್ದರು ಎಂದು ಹೇಳಿದರು.
ರಾಷ್ಟçಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿಕೊಂಡ ವಿಷಯವನ್ನು ಇತಿಹಾಸ ಹೇಳುತ್ತದೆ. ಇದು ಬೇಡರ ಚರಿತ್ರೆಯೇ ಆಗಿದೆ. ಚಿತ್ರದುರ್ಗ, ತರಿಕೆರೆ, ಸುರಪುರ ಉಮ್ಮತ್ತೂರು ಮುಂತಾದ ಪಾಳೆಯಗಾರರು ಅವರ ಅಧಿಕಾರಾವಧಿಯಲ್ಲಿ ಜನಪರವಾಗಿ ಮಾಡಿದ ಕೆಲಸ-ಕಾರ್ಯಗಳು, ಗುರುಮಠಗಳೊಂದಿಗಿದ್ದ ಅವಿನಾಭಾವ ಸಂಬAಧದ ಬಗ್ಗೆ ದಾಖಲೆಗಳು ತಿಳಿಸುತ್ತವೆ. ಚಿತ್ರದುರ್ಗವನ್ನಾಳಿದ ಮತ್ತಿ ತಿಮ್ಮಣ್ಣನಾಯಕ, ಪ್ರಗತಿಪರ ದೊರೆ ಹಾಗೂ ಚಿತ್ರದುರ್ಗದಲ್ಲಿ ಮುರುಘಾಮಹಾಸ್ವಾಮಿಗಳನ್ನು ತನ್ನ ಭಕ್ತಿಯಿಂದ ನೆಲೆನಿಲ್ಲುವಂತೆ ಮಾಡಿದ ರಾಜಾಬಿಚ್ಚುಗತ್ತಿ ಭರಮಪ್ಪನಾಯಕ, ಹಿರೇಮದಕರಿನಾಯಕ, ದುರ್ಗ ಮರೆಯಲಾಗದ ರಾಜವೀರ ಮದಕರಿನಾಯಕ, ಕಂಪಿಲೆಯ ಕಂಪಿಲೆಯರಾಯ, ವಿಜಯನಗರದ ಎಚ್.ಎಂ.ನಾಯಕ, ಬ್ರಿಟೀಷರ ವಿರುದ್ಧ ಹೋರಾಡಿದ ಸುರಪುರದ ರಾಜ ವೆಂಕಟಪ್ಪನಾಯಕ, ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಸಿಂಧೂರ ಲಕ್ಷö್ಮಣ, ಹಲಗಲಿಯ ಬೇಡರು ಇವರೆಲ್ಲರೂ ಶಕ್ತಿ-ಭಕ್ತಿಗಳ ಸಂಗಮವಾಗಿದ್ದರು. ಬ್ರಿಟೀಷರು ತಂದ ಅರಣ್ಯ ಕಾಯ್ದೆಗಳು ಬೇಡರ ಜೀವನಾಧಾರವಾಗಿದ್ದ ಅರಣ್ಯದಿಂದಲೂ ಹೊರದೂಡಿತು. ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಹಲಗಲಿಯ ಬೇಡರು ದಕ್ಷಿಣ ಭಾರತದ ಮೊಟ್ಟ ಮೊದಲು ಸ್ವಾತಂತ್ರö್ಯ ಹೋರಾಟ ಆರಂಭಿಸಿದರು. ಸಿಂಧೂರ ಲಕ್ಷö್ಮಣನಂತವರ ಹೋರಾಟ ಇಂದಿಗೂ ಅಮರ ಎಂದು ಸಚಿವರು ಸ್ಮರಿಸಿದರು.
ಶ್ರೀ ಮಹರ್ಷಿ ವಾಲ್ಮೀಕಿಯು ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವಕ್ಕೆ ಸಾರಿದ ಸ್ವಾತಂತ್ರö್ಯ, ಸಮಾನತೆ, ಸಹೋದರತೆಯ ತತ್ವವನ್ನು ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಡೀ ವಿಶ್ವಕ್ಕೆ ಬದಲಾವಣೆಯ ಮಾರ್ಗ ತೋರೋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ವಾಲ್ಮೀಕಿ ನಾಯಕ ಜನಸಂಖ್ಯೆ ಇರುವುದರಿಂದ ರಾಜ್ಯಮಟ್ಟದ ವಾಲ್ಮೀಕಿ ಜಯಂತಿ ಚಿತ್ರದುರ್ಗದಲ್ಲಿ ಆಚರಿಸುವಂತಾಗಬೇಕು ಎಂದು ಹೇಳಿದರು.
ರಾಮಾಯಣ ಮಹಾಕಾವ್ಯವು ತಂದೆ-ಮಗ, ಅಣ್ಣ ತಮ್ಮಂದಿರು, ಕುಟುಂಬ, ರಾಜ್ಯ, ಮಾದರಿ ಸಮಾಜ ನಿರ್ಮಾಣ ಹೇಗೆ ಆಗಬೇಕು ಎಂಬ ಕಲ್ಪನೆಯನ್ನು ಇಡೀ ಜಗತ್ತಿಗೆ ಕೊಟ್ಟವರು ವಾಲ್ಮೀಕಿ. ವಾಲ್ಮೀಕಿಯವರ ವಿಚಾರ, ಸಂದೇಶಗಳನ್ನು ಪ್ರಸ್ತುತ ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ಮದಕರಿ ನಾಯಕರ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಕಳೆದ ಬಾರಿ ಕೇಂದ್ರ ಗೃಹ ಸಚಿವರು ಘೋಷಣೆ ಮಾಡಿದ್ದರು. ಜಿಲ್ಲಾಡಳಿತ 30 ಎಕರೆ ಜಾಗವನ್ನು ನೀಡಿದರೆ ಮದಕರಿ ನಾಯಕರ ಥೀಮ್ ಪಾರ್ಕ್ ಜೊತೆಗೆ ಬೃಹತ್ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಿ, ಪ್ರತಿಯೊಬ್ಬರಿಗೂ ಮದಕರಿ ನಾಯಕರ ಹಾಗೂ ವಾಲ್ಮೀಕಿಯ ಶ್ರೇಯವನ್ನು ಜಗತ್ತಿಗೆ ತಿಳಿಸುವ ಕಾರ್ಯಕ್ಕಾಗಿ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಚಳ್ಳಕೆರೆಯ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಓಬಣ್ಣ ಉಪನ್ಯಾಸ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮುದ್ದಾಪುರ ಹೊಸಹಟ್ಟಿಯ ಪಿ.ತಿಪ್ಪೇಸ್ವಾಮಿ, ಲಿಂಗವ್ವನಾಗ್ತಿಹಳ್ಳಿ ಎಂ.ತಿಪ್ಪೇಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನೌಕರ ಹಿರಿಯೂರು ತಾಲ್ಲೂಕಿನ ಗುಯಿಲಾಳು ಗ್ರಾಮದ ಹೆಚ್.ತಿಪ್ಪಯ್ಯ, ಚಿತ್ರದುರ್ಗ ನಗರಸಭೆಯ ಪ್ರಥಮ ಮಹಿಳಾ ಉಪಾಧ್ಯಕ್ಷೆಯಾಗಿದ್ದ ಎನ್.ಸುಮಾ, ಜೋಡಿಚಿಕ್ಕೇನಹಳ್ಳಿಯ ಗೊಲ್ಲರಹಟ್ಟಿಯ ಎ.ತಿಪ್ಪೇಸ್ವಾಮಿ ಅವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಶ್ರೇಣಿ ಪಡೆದ ಅಸೆಚನ ಪಿ ದಾಸರಿ ಹಾಗೂ ಹಿರಿಯೂರು ತಾಲ್ಲೂಕು ದೇವರಕೊಟ್ಟ ಏಕಲವ್ಯ ವಸತಿ ಶಾಲೆಗೆ ಪ್ರಥಮ ಶ್ರೇಣಿ ಪಡೆದ ಸಂಜೀವ್ ಮುತ್ತಯ್ಯ ಅವರಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗದು ಬಹುಮಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ನಾಯಕ ಸಮಾಜದ ಅಭಿವೃದ್ಧಿಗಾಗಿ 5 ಎಕರೆ ಜಮೀನು ಹಾಗೂ ವಾಲ್ಮೀಕಿ ಭವನಕ್ಕೆ ಮೂಲಸೌಕರ್ಯ ಒದಗಿಸುವ ಸಲುವಾಗಿ ರೂ.50 ಲಕ್ಷ ಅನುದಾನ ನೀಡುವಂತೆ ಚಿತ್ರದುರ್ಗ ಜಿಲ್ಲಾ ನಾಯಕ ಸಮಾಜದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾ ರಮೇಶ್, ಉಪಾಧ್ಯಕ್ಷೆ ಶಕೀಲಾಭಾನು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ಹೆಚ್.ದಿವಾಕರ್, ಮುಖಂಡರಾದ ಡಾ.ಗುಡ್ಡದೇಶ್ವರಪ್ಪ, ಸಿ.ಜಿ.ಶ್ರೀನಿವಾಸ್, ಓ.ಬಿ.ಬಸವರಾಜ್, ಮಂಜುನಾಥ್, ಸಂಪತ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.
