ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ; ಹತ್ತು ದಿನಗಳವರೆಗೆ ಅವಧಿ ವಿಸ್ತರಣೆ
ಬೆಂಗಳೂರು : ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಮಹತ್ವದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಅಧಿಕಾರಿಗಳ ಜೊತೆ ವಿಸ್ತೃತವಾಗಿ ಚರ್ಚಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿ ಮೇರೆಗೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಮಹತ್ವದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಅದರ ಅವಧಿಯನ್ನು ಇನ್ನೂ ಹತ್ತು ದಿನಗಳವರೆಗೆ ವಿಸ್ತರಿಸಲಾಗಿದ್ದು, ಅಕ್ಟೋಬರ್ 18ರವರೆಗೆ ಎಲ್ಲ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ. 90ರಷ್ಟು ಜನ ಸಮೀಕ್ಷೆಗೆ ಸಹಕಾರ ನೀಡುತ್ತಿದ್ದಾರೆ ಮತ್ತು ಗಣತಿದಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ಸರ್ಕಾರದ ಪರವಾಗಿ ಅವರೆಲ್ಲರಿಗೂ ಹಾಗೂ ಮಾಹಿತಿ ನೀಡಿದ ನಾಗರಿಕರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ಕೆಲವೊಂದು ಕೆಲಸಗಳಿಂದಾಗಿ ಸಮೀಕ್ಷೆ ನಿಧಾನವಾಗಿ ಪ್ರಾರಂಭವಾಗಿದೆ. ನಮ್ಮ ಸರ್ಕಾರದ ಪರವಾಗಿ ಮನವಿ ಮಾಡುವುದೇನೆಂದರೆ, ರಾಜ್ಯದ ಹಿತಕ್ಕಾಗಿ ಮತ್ತು ಎಲ್ಲರಿಗೂ ನ್ಯಾಯ ಒದಗಿಸಲು ಈ ಸಮೀಕ್ಷೆ ಅತ್ಯಗತ್ಯ. ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಬಂದು ನೆಲಸಿರುವವರ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಯನ್ನು ತಿಳಿಯಲು ಇದು ಮುಖ್ಯ. ಆದ್ದರಿಂದ, ಬೆಂಗಳೂರಿನ ನಿವಾಸಿಗಳು ಗಣತಿದಾರರಿಗೆ ಸಹಕಾರ ನೀಡಬೇಕು ಅಥವಾ ಆನ್‌ಲೈನ್‌ನಲ್ಲಿ ಸಹ ಮಾಹಿತಿ ನೀಡಬಹುದು. ಎಲ್ಲಾ ಮಾಹಿತಿ ನೀಡಲೇಬೇಕೆಂಬ ಒತ್ತಡ ಇಲ್ಲ, ನಿಮಗೆ ಎಷ್ಟು ಮಾಹಿತಿ ನೀಡಬೇಕೆಂದು ಅನಿಸುತ್ತದೆಯೋ ಅಷ್ಟನ್ನೇ ನೀಡಿ ಸಹಕರಿಸಬೇಕೆಂದು ವಿನಂತಿ.