*ಅಡುಗೆ ಸಿಲಿಂಡರ್ ಸ್ಫೋಟ: ಹೊಸಪೇಟೆಯ ಗಾದಿಗನೂರಿನಲ್ಲಿ ಏಳು ಮಂದಿಗೆ ಗಾಯ; ಒಬ್ಬ ಮಹಿಳೆಯ ಸ್ಥಿತಿ ಗಂಭೀರ*
ವಿಜಯನಗರ ಜಿಲ್ಲೆ
ಹೊಸಪೇಟೆ ತಾಲ್ಲೂಕಿನ ಗಾದಿಗನೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಅಡುಗೆ ಅನಿಲ ಸಿಲಿಂಡರ್ ಸ್ಫೋಟದಿಂದಾಗಿ ಒಂದೇ ಮನೆಯ ಏಳು ಮಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಮತ್ತು ಗಾಯಾಳುಗಳ ವಿವರ:
ಬೆಳಗಿನ ಜಾವ 5:15ರ ಸುಮಾರಿಗೆ ವಕೀಲ ಹಾಲಪ್ಪ ಎಂಬುವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಮನೆಯಲ್ಲಿ ಸುಮಾರು ಹತ್ತು ಮಂದಿ ವಾಸವಾಗಿದ್ದರು. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಉಳಿದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆಯವರು ದೃಢಪಡಿಸಿದ್ದಾರೆ.
*ಅವಘಡಕ್ಕೆ ಕಾರಣ* :
ಮನೆಯವರು ಹೇಳಿರುವ ಪ್ರಕಾರ, ಮುಂಜಾನೆ ಅಡುಗೆ ಅನಿಲ ಸೋರಿಕೆಯ ವಾಸನೆ ಬರುತ್ತಿತ್ತು. ಈ ಸಂದರ್ಭದಲ್ಲಿ ಕವಿತಾ ಎಂಬುವವರು ಬೆಳಿಗ್ಗೆ ಸ್ಟವ್ ಹಚ್ಚಲು ಹೋದಾಗ, ಒಮ್ಮೆಲೇ ಬೆಂಕಿ ಹೊತ್ತಿಕೊಂಡು ಈ ದೊಡ್ಡ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಮನೆ ಹೊಸಪೇಟೆ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ.