ಇಂಡಿಯಾನ-ಎಸ್‍ಜೆಎಂ ಹಾರ್ಟ್ ಸೆಂಟರ್‌ನ ಕಾರ್ಯನಿರ್ವಾಹಕ ಅಧಿಕಾರಿ ರೂಪೇಶ್ ಕುಮಾರ್ ಶೆಟ್ಟಿ ಹೇಳಿಕೆ
ನೊಂದಾಯಿತ ಪತ್ರಕರ್ತರಿಗೆ ಉಚಿತ ಓಪಿಡಿ ಸೇವೆ
ರಿಯಾಯಿತಿ ದರದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ
********
ಚಿತ್ರದುರ್ಗ,ಸೆ.24:
ಜಿಲ್ಲೆಯ ನೊಂದಾಯಿತ ಪತ್ರಕರ್ತರಿಗೆ ಇಂಡಿಯಾನಾ-ಎಸ್‍ಜೆಎಂ ಹಾರ್ಟ್ ಸೆಂಟರ್‌ನಲ್ಲಿ ಉಚಿತ ಓಪಿಡಿ ಸೇವೆ ನೀಡಲಾಗುವುದು. ಇದರೊಂದಿಗೆ ರಿಯಾಯಿತಿ ದರದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ ನೀಡುವ ಯೋಜನೆ ಜಾರಿಗೊಳಿಸುವುದಾಗಿ ಇಂಡಿಯಾನ-ಎಸ್‍ಜೆಎಂ ಹಾರ್ಟ್ ಸೆಂಟರ್‌ನ ಕಾರ್ಯನಿರ್ವಾಹಕ ಅಧಿಕಾರಿ ರೂಪೇಶ್ ಕುಮಾರ್ ಶೆಟ್ಟಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದ ಪತ್ರಿಕಾಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಇಂಡಯಾನ-ಎಸ್‍ಜೆಎಂ ಹಾರ್ಟ್ ಸೆಂಟರ್ ವತಿಯಿಂದ ಕಾರ್ಯನಿರತ. ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ ಉಚಿತ ಹೃದಯ ರೋಗ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಇಂದು ಶ್ರೀಮಂತವಾಗಿದೆ. ಆದರೆ ಪತ್ರಕರ್ತರು ಬಡವರಾಗಿಯೇ ಇದ್ದಾರೆ ಎನ್ನುವ ಮಾತು ಮಾಧ್ಯಮ ವಲಯದಲ್ಲಿ ಚಾಲ್ತಿಯಲ್ಲಿದೆ. ಇದು ಸತ್ಯವಾಗಿದ್ದು, ಪತ್ರಕರ್ತರು ತಮ್ಮ ಆರೋಗ್ಯದ ಕಾಳಜಿಯನ್ನೂ ಮರೆತು ಕೆಲಸ ಮಾಡುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಇಂಡಿಯಾನಾ-ಎಸ್‍ಜೆಎಂ ಹಾರ್ಟ್ ಸೆಂಟರ್ ವತಿಯಿಂದ ಮಾಧ್ಯಮದವರಿಗೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡಲಾಗುವುದು. ನೊಂದಾಯಿತ ಪತ್ರಕರ್ತರಿಗೆ ಹೊರರೋಗಿ ಚಿಕಿತ್ಸೆಗಳನ್ನು ಸಂಪೂರ್ಣ ಉಚಿತ ಮಾಡಲಾಗುವುದು. ಒಳರೋಗಿಗಳಿಗೂ ಶಸ್ತ್ರಚಿಕಿತ್ಸೆಗಳಲ್ಲಿಯೂ ರಿಯಾಯಿತಿ ನೀಡಲಾಗುವುದು. ಇನ್ನು ವಾರದಲ್ಲಿ ಯೋಜನೆಯನ್ನು ಜಾರಿಗೊಳಿಸುವುದಾಗಿ ರೂಪೇಶ್ ಕುಮರ್ ಶೆಟ್ಟಿ ಘೋಷಿಸಿದರು.
ಇಂಡಿಯಾನಾ ಹಾರ್ಟ್ ಸೆಂಟರ್‌ನಲ್ಲಿ ಸರ್ಕಾರ ವಿವಿಧ ಯೋಜನೆಗಳು ಸವಲತ್ತು ಲಭ್ಯವಿವೆ. ಬಿ.ಪಿ.ಎಲ್. ಕಾರ್ಡು ಹೊಂದಿರುವರಿಗೆ ಉಚಿತವಾಗಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ನೀಡಲಾಗುವುದು. ಯಾವುದೇ ತುರ್ತು ಸಂದರ್ಭದಲ್ಲಿ ಮುಂಗಡ ಹಣ ಪಡೆದು ಚಿಕಿತ್ಸೆ ನೀಡುವ ಪದ್ದತಿ ಇಂಡಿಯಾನಾ ಹಾರ್ಟ್ ಸೆಂಟರ್‌ನಲ್ಲಿ ಇಲ್ಲ. ಚಿತ್ರದುರ್ಗ ಜಿಲ್ಲೆ ಆರ್ಥಿಕವಾಗಿ ಸಾಕಷ್ಟು ಹಿಂದುಳಿದ ಜನರು ಇದ್ದಾರೆ. ಇದನೆಲ್ಲಾ ಸಮೀಕ್ಷೆ ನಡೆಸಿ ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಸಹ ಸಾಮಾಜಿಕ ಸೇವೆ ಮಾಡವ ಇಚ್ಚಾಶಕ್ತಿಯನ್ನು ಹೊಂದಿರಬೇಕು. ಇದೇ ಧ್ಯೇಯದೊಂದಿಗೆ ಇಂಡಿಯಾನಾ ಹಾರ್ಟ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಚಿತ್ರದುರ್ಗದಲ್ಲಿ ಮೂರು ಹೃದ್ರೋಗ ತಜ್ಞರು ದಿನ 24 ಗಂಟೆಯೂ ಸೇವೆ ಲಭ್ಯವಿರುತ್ತಾರೆ ಎಂದು ರೂಪೇಶ್ ಶೆಟ್ಟಿ ತಿಳಿಸಿದರು.
ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮಾತನಾಡಿ, ಪತ್ರಕರ್ತರು ಸಂಕಷ್ಟದಲ್ಲಿ ಜೀವನ ನಡೆಸುತ್ತಾರೆ. ಕೆಲಸ ಒತ್ತಡದ ನಡುವೆ ಊಟ ಹಾಗೂ ಆರೋಗ್ಯದ ಕಾಳಜಿ ವಹಿಸುವುದನ್ನು ಮರೆಯುತ್ತಾರೆ. ಇತ್ತೀಚೆಗೆ ಬಾಲಗೋಟೆಯ ಪತ್ರಕರ್ತ ಸಹೋದರ 42 ವರ್ಷ ವಯಸ್ಸಿನ ಪ್ರಕಾಶ್ ಗುಳೇದಗುಡ್ಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವರದಿಗಾಗಿ ತೆರಳಿದ ಸಂದರ್ಭದಲ್ಲಿ ಕುಸಿದು ಬಿದ್ದು ಮೃತಪಟ್ಟ ಕಹಿ ಘಟನೆ ನಡೆದಿದೆ. ಆದ್ದರಿಂದ ಪತ್ರಕರ್ತರು ಕೆಲಸದ ನಡುವೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹೃದಯ ಶ್ರೀಮಂತಿಕೆಯ ನೋಟದಿಂದ ಸಮಾಜದ ವರದಿಗಳನ್ನು ಮಾಡುವುದರ ಜೊತೆಗೆ ಹೃದಯ ಆರೋಗ್ಯಕ್ಕೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾದರೂ ಸಹ ಹೃದಯ ಸಂಬಂಧಿ ಚಿಕಿತ್ಸೆ ನಗರದಲ್ಲಿ ಲಭಿಸುವುದು ದುಸ್ತರವಾಗಿದೆ. ಸ್ಟಂಟ್ ಅಳವಡಿಸವ ಶಸ್ತ್ರಚಿಕಿತ್ಸೆಗೆ ಜನರು ಬೆಂಗಳೂರು ಅಥವಾ ಮಣಿಪಾಲ್‍ಗೆ ತೆರಳುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು. ಜಿಲ್ಲೆಯಲ್ಲಿಯೇ ಹೃದಯ ಸಂಬಂಧ ಖಾಯಿಲೆಗಳಿಗೆ ಚಿಕಿತ್ಸೆ ದೊರೆಯಬೇಕು. ಹೃದ್ರೋಗ ತಜ್ಞರು ಸಹ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಮೂಲಕ ಜನರಲ್ಲಿ ನಂಬಿಕೆ ಮೂಡಿಸಬೇಕು. ಇದಕ್ಕೆ ಮಾಧ್ಯಮಗಳು ಸದಾ ಸಹಕಾರ ನೀಡಲಿವೆ ಚಿಕ್ಕಪ್ಪನಹಳ್ಳಿ ಷಣ್ಮುಖ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ ಮಾತನಾಡಿ, ಪತ್ರಕರ್ತರು ನಿರಂತರ ಒತ್ತಡದಲ್ಲಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಇತ್ತೀಚೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಐದಾರು ಪತ್ರಕರ್ತರು ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಪತ್ರಕರ್ತರ ಆರೋಗ್ಯದ ದೃಷ್ಠಿಯಿಂದ ಇಂಡಿಯಾನ-ಎಸ್‍ಜೆಎಂ ಹಾರ್ಟ್ ಸೆಂಟರ್ ವತಿಯಿಂದ ಪತ್ರಕರ್ತರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಹೃದಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಪತ್ರಕರ್ತರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹೃದ್ರೋಗ ತಜ್ಞ ಡಾ.ಆರ್.ಎಸ್.ಕಾರ್ತಿಕ್ ಮಾತನಾಡಿ, ಇಂಡಿಯಾನ ಎಸ್.ಜೆ.ಎಂ ಹಾರ್ಟ್ ಸೆಂಟರ್‌ನಲ್ಲಿ ಮೂರು ಮಂದಿ ಹೃದ್ರೋಗ ತಜ್ಞರಿದ್ದು, ತ್ವರಿತವಾಗಿ ರೋಗಿಗಳಿಗೆ ಹೃದಯ ತಪಾಸಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳು 80 ರಿಂದ 100 ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶೇ.50ರಷ್ಟು ಹೃದಯಘಾತಗಳು 50 ವರ್ಷದ ಒಳಗಿನ ವ್ಯಕ್ತಿಗಳಲ್ಲಿ ಜಾಸ್ತಿಯಾಗುತ್ತಿವೆ. ಇದಕ್ಕೆ ಬೀಡಿ, ಸಿಗರೇಟು ಹಾಗೂ ತಂಬಾಕು ಬಳಕೆಯೂ ಕಾರಣ. ಹಾಗಾಗಿ ತಂಬಾಕು, ಧೂಮಪಾನ ತ್ಯಜಿಸಬೇಕು ಹಾಗೂ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಹರಿಯಬ್ಬೆ ಸಿ. ಹೆಂಜಾರಪ್ಪ,ಕಾರ್ಯದರ್ಶಿಗಳಾದ ವಿರೇಶ್ ವಿ ಅಪ್ಪು, ವಿನಾಯಕ ಬಿ ತೊಡರನಾಳ್, ಪತ್ರಕರ್ತರಾದ ದರ್ಶನ್ ಇಂಗಳದಾಳ್, ರಂಗನಾಥ್, ನಾಗೇಶ್, ಪ್ರಹ್ಲಾದ್, ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು.
========
