*ಗಣಿಗಾರಿಕೆ ಓವರ್ ಲೋಡ್ ವಾಹನಗಳ ವಿರುದ್ಧ ದಂಡ ವಿಧಿಸಿರುವ ಮಾಹಿತಿ ನೀಡಿ : ಶೋಭಾ ಕರಂದ್ಲಾಜೆ*

*ಬೆಂಗಳೂರು ನಗರ ಜಿಲ್ಲೆ ಸೆ. 23 (ಕರ್ನಾಟಕ ವಾರ್ತೆ):* ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಜಲ್ಲಿ, ಸೈಜುಗಲ್ಲು, ಮರಳು ಮತ್ತು ಎಂ.ಸ್ಯಾಂಡ್ ಸಾಗಿಸುವ ವಾಹನಗಳ ವಿರುದ್ಧ ಕೈಗೊಂಡಿರುವ ಕ್ರಮ ಹಾಗೂ ದಂಡ ವಿಧಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ನಗರದ ಬನಶಂಕರಿಯಲ್ಲಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ರಾಜಸ್ವ ಬರುತ್ತಿಲ್ಲ. ನಿಯಮ ಉಲ್ಲಂಘಿಸಿದ ಲಾರಿಗಳಿಗೆ ಜಿಲ್ಲಾಧಿಕಾರಿಗಳು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಆದರೆ, ಅಧಿಕಾರಿಗಳು ದಂಡ ವಸೂಲಿ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಇನ್ನೂ ಮುಂದೆ ಮಿತಿಮೀರಿ ಲೋಡ್ ಸಾಗಿಸುವ ವಾಹನಗಳಿಗೆ ಮುಲಾಜಿಲ್ಲದೆ ದಂಡ ಹಾಕಬೇಕು. ಆದಾಯ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕ್ರೀಡಾ ಇಲಾಖೆಯ ಅಧಿಕಾರಿಗಳು ‘ಖೇಲೋ ಇಂಡಿಯಾ’ಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಆಗಬೇಕು. ಸ್ಥಳೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಅದಕ್ಕೆ ತಕ್ಕಂತೆ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕು.

ತನ್ಮೂಲಕ ಮುಂದಿನ ದಿನಗಳಲ್ಲಿ ‘ಖೇಲೋ ಇಂಡಿಯಾ’ ಕ್ರೀಡಾಕೂಟಕ್ಕೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿದ್ದು, ಕೆಲವೆಡೆ ಕಾಮಗಾರಿ ನಡೆಸದೆ ಗುತ್ತಿಗೆದಾರರು ಬಿಲ್ ಪಡೆದಿರುವ ಬಗ್ಗೆ ದೂರುಗಳು ಬಂದಿವೆ. ಸಾಕಷ್ಟು ಮನೆಗಳಿಗೆ ನಲ್ಲಿ ಸಂಪರ್ಕವನ್ನೇ ಕಲ್ಪಿಸದಿರುವುದು ಕಂಡುಬಂದಿದ್ದು, ಅಂತಹ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಅವರು ತಿಳಿಸಿದರು.

ಮಹದೇವಪುರ ಕ್ಷೇತ್ರ ಹಾಗೂ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳ ಉದ್ಘಾಟನೆಗಳಿಗೆ ಲೋಕಸಭಾ ಸದಸ್ಯರನ್ನು ಆಹ್ವಾನ ಮಾಡುವಂತೆ ಹಾಗೂ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಹಾಯಕ ಕಾರ್ಯಪಾಲ ಇಂಜನಿಯರ್ ರವರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವಂತಹ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಪಾದರ್ಥಗಳ ಗುಣಮಟ್ಟವನ್ನು ಪರಿಶೀಲಿಸಿ ನಿಗದಿಪಡಿಸಿದ ಮೆನು ಚಾರ್ಟ್ ಪ್ರಕಾರ ಆಹಾರವನ್ನು ವಿತರಿಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮಾತನಾಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 44 ಮೆಟ್ರಿಕ್ ನಂತರದ ಮತ್ತು 13 ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 7 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ನಿಗದಿಪಿಡಿಸಿರುವ ಮೆನು ಚಾರ್ಟ್ ಪ್ರಕಾರ ಆಹಾರವನ್ನು ನೀಡಲಾಗುತ್ತಿದೆ . ಅಲ್ಲದೇ, ವಿದ್ಯಾರ್ಥಿ ನಿಲಯಗಳಲ್ಲಿ ಟೇಸ್ಟ್ ರಿಜಿಸ್ಟರ್ ನ್ನು ನಿರ್ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ ಮೋಹನ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ. ಜಿ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯತೀಶ್.ಆರ್ ಅವರು ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!