*ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಕ್ಕರೆ ನಗರಿ*
*87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ*
ಮಂಡ್ಯಡಿ.19 (ಕರ್ನಾಟಕ ವಾರ್ತೆ) ಮಂಡ್ಯ ಸಕ್ಕರೆ ನಾಡು, ಅಥಿತಿಗಳಿಗೆ ಅಕ್ಕರೆಯ ಬೀಡಾಗಿರುವ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಕಂಪು ಸೂಸಲು ಸುಜ್ಜಾಗಿದ್ದು, ತಳಿರು ತೋರಣ, ದೀಪಾಲಂಕಾರದಿಂದ ಇಡೀ ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ವಿಶಾಲವಾಗಿ ಚಾಚಿಕೊಂಡಿರುವ ಹೆದ್ದಾರಿ ಇಕ್ಕೆಲದಲ್ಲಿ ಸಾಹಿತಿ- ಕವಿಗಳ ಘೋಷ ವಾಕ್ಯಗಳು, ಕನ್ನಡ- ಬಾವುಟ, ಕಬ್ಬಿನ ಜಲ್ಲೆ-ಬಾಳೆ ಕಂದು- ಮಾವಿನ ಸೊಪ್ಪಿನಿಂದ ನಿರ್ಮಿಸಿದ ಹಸಿರು ತೋರಣ, ಒಪ್ಪ ಓರಣ ವಾಗಿರುವ ರಸ್ತೆಗಳು ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾಹಿತ್ಯಾಸಕರನ್ನು ಸ್ವಾಗತಿಸುತ್ತಿವೆ. ಮನೆ ಮನೆಗೆ ಕನ್ನಡ ಬಾವುಟ: ನುಡಿಜಾತ್ರೆ ಅಂಗವಾಗಿ ಮಂಡ್ಯ ನಗರಿ ಸಕಲ ರೀಚಿಯಲ್ಲೂ ಸಜ್ಜಾಗಿದ್ದು, ನಗರದ 25 ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನಡ ಬಾವುಟ ರಾರಾಜಿಸುತ್ತಿದೆ. ಇದಷ್ಟೇ ಅಲ್ಲದೇ ಮಂಡ್ಯ ನಗರದ ಎಲ್ಲಾ ರಸ್ತೆ, ಪ್ರಮುಖ ವೃತ್ತಗಳಲ್ಲಿ ಕೆಂಪು-ಹಳದಿ ಬಣ್ಣದ ಬಂಟಿಂಗ್ಸ್ ಕಂಗೊಳಸುತ್ತಿದೆ.
*ವರ್ಣಚಿತ್ರಾಲಂಕಾರ*: ನಗರದ ಹೃದಯ ಭಾಗ, ಮುಖ್ಯ ರಸ್ತೆಯ ಇಕ್ಕೆಲದಲ್ಲಿನ ಕಟ್ಟಡಗಳು, ಕಾಂಪೌಂಡ್ ಗಳಲ್ಲಿ ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳು ನಾಡಿನ ಜ್ಞಾನಪೀಠ ಪುರಸ್ಕೃತರು, ಕವಿಗಳು, ಸಾಹಿತಿಗಳ ಚಿತ್ರಗಳು ಕಂಗೊಳಿಸುತ್ತಿದೆ.