ಬಾಗಲಕೋಟ ಲೋಕಸಭೆ ಕ್ಷೇತ್ರ : ಕಾಂಗ್ರೇಸ್ ಪಾಳೆಯದಲ್ಲಿ ಒಗ್ಗಟ್ಟಿನ ಕಲರವ
ಬಾಗಲಕೋಟೆ: ಟಿಕೆಟ್ ಹಂಚಿಕೆ ವಿಷಯದಲ್ಲಿ ಜಿಪಂ.ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಸಮಾಧಾನದ ಮಧ್ಯೆ ಜಿಲ್ಲೆಯ ಕೈ ಶಾಸಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇರಿದ್ದ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಪಕ್ಷದ ಅಭ್ಯರ್ಥಿ
ಸಂಯುಕ್ತಾ ಪಾಟೀಲ ಪರ ಚುನಾವಣೆ ಪ್ರಚಾರ ಕೈಗೊಂಡು
ಅವರನ್ನು ಗೆಲ್ಲಿಸುತ್ತೇವೆ ಎನ್ನುವ ಭರವಸೆ ವ್ಯಕ್ತ ಪಡಿಸಿದ್ದು, ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಹುಮ್ಮಸ್ದು ಮೂಡಲು ಕಾರಣವಾಗಿದೆ.
ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆದಾಗಿನಿಂದ ಇದುವರೆಗೂ ಜಿಲ್ಲಾ ಕಾಂಗ್ರೆಸ್ಸಿನ ಹಾಲಿ, ಮಾಜಿ ಶಾಸಕರು ಒಟ್ಟಾಗಿ ಸೇರಿ ಸಂಯುಕ್ತಾ ಪರ ಕೆಲಸ ಮಾಡುವ ಬಗೆಗೆ ಮಾತನಾಡಿರಲಿಲ್ಲ. ಆದರೆ ಇಂದು ಎಲ್ಲರೂ ಸೇರಿ ಗೆಲುವಿನ ಮಂತ್ರ ಜಪಿಸಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಲಿದೆ ಎನ್ನಲಾಗುತ್ತಿದೆ.
ಗಮನಾರ್ಹ ಆಂಶವೆಂದರೆ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ
ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ಹಾಲಿ, ಮಾಜಿ ಶಾಸಕರು ಸೇರಿದ್ದರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಕಚೇರಿಗೆ ಬರುವರೋ ಹೇಗೋ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿತ್ತು.
ಪತ್ರಿಕಾಗೋಷ್ಠಿ ಆರಂಭಗೊಳ್ಳುವ ಹೊತ್ತಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಆಗಮಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟದಂತೂ ನಿಜ.
ಪತ್ರಿಕಾಗೋಷ್ಠಿಗೆ ಆಗಮಿಸಿದ ಅವರು ಏನು ಮಾತನಾಡುತ್ತಾರೋ ಎನ್ನುವ ಕಾತರದ ವೇಳೆ ಕಾಶಪ್ಪನವರ ಎಲ್ಲ ಮುಖಂಡರ ಅಭಿಪ್ರಾಯವೇ ನನ್ನದೂ ಆಗಿದೆ. ಮಾದ್ಯಮದವರ ಪ್ರಶ್ನೆಗೆ ಹೊರಗೆ ಉತ್ತರಿಸುವುದಾಗಿ ಹೇಳಿದಾಗ, ಅವರ ಮಾತು ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿತ್ತು.
ಪಕ್ಷದ ಕಚೇರಿಯಿಂದ ಹೊರ ಬಂದ ಅವರು ಟಿಕೆಟ್ ಹಂಚಿಕೆ ” ನನಗೂ ನೋವಾಗಿದ್ದು ನಿಜ.” ಆದರೆ ಪಕ್ಷದ ಹೈಕಮಾಂಡ ನಿರ್ಧಾರಕ್ಕೆ ಬದ್ದನಾಗಿ, ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಕೆಲಸ ಮಾಡಿ, ಅವರನ್ನು ಗೆಲ್ಲಿಸಲಾಗುವುದ” ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಟಿಕೆಟ್ ವಂಚಿತರಾಗಿರುವ ಪತ್ನಿ ವೀಣಾ ಕಾಶಪ್ಪನವರ ಕೂಡ ಆಗಿರುವ ನೋವನ್ನು ಮರೆತು ಸಂಯುಕ್ತ ಪಾಟೀಲ ಪರ ಚುನಾವಣೆ ಪ್ರಚಾರಕ್ಕೆ ಬರಲಿದ್ದಾರೆ ಎಂದರು.
ಪತಿ ವಿರುದ್ಧ ಪತ್ನಿ ಅಸಮಾಧಾನ
ವಿಜಯಾನಂದ ಕಾಶಪ್ಪನವರ ಹೇಳಿಕೆಯಿಂದ ಇನ್ನೇನು ಪಕ್ಷದಲ್ಲಿನ ಗೊಂದಲವೆಲ್ಲ ನಿವಾರಣೆ ಆಯಿತು. ಎಲ್ಲರೂ ಒಗ್ಗಟ್ಡಿನಿಂದ ಕೆಲಸ ಮಾಡಲಿದ್ದಾರೆ ಎನ್ನುತ್ತಿರುವಾಗಲೇ ಶಾಸಕ ವಿಜಯಾನಂದ ಕಾಶಪ್ಪನವರ ಒಗ್ಗಟ್ಡಿನ ಮಂತ್ರಕ್ಕೆ
ಅವರ ಪತ್ನಿ ವೀಣಾ ಕಾಶಪ್ಪನವರ ಅಪಸ್ವರ ಎತ್ತುವ ಮೂಲಕ ಅಸಮಾಧಾನ ಶಮನ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮುಂದಿನ ನಡೆಯ ಬಗೆಗೆ ಸ್ಪಷ್ಟ ನಿರ್ಧಾರಕ್ಕೆ ಇನ್ನೂ ಸಮಯಾವಕಾಶವಿದೆ. ವಿಜಯಾನಂದ ಕಾಶಪ್ಪನವರ ಶಾಸಕರಾಗಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅದಕ್ಕೆ ನನ್ನ ಸಹಮತವಿಲ್ಲ. ಬೆಂಬಲಿಗರ ಅಭಿಪ್ರಾಯ ಪಡೆಯುತ್ತಿದ್ದೇನೆ. ” ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯ ಆಗಿದ್ದು ನನಗೆ” ಎನ್ನುವ ಮಾತನ್ನು ಪುನರುಚ್ಚರಿಸಿದ್ದಾರೆ.
ಆ ಮೂಲಕ ಎಲ್ಲವೂ ಸರಿಯಾಗಿಲ್ಲ ಎನ್ನುವ ಸಂದೇಶ ನೀಡಿದ್ದಾರಾದರೂ ವಿಜಯಾನಂದ ಕಾಶಪ್ಪನವರ ಹೇಳಿಕೆ
ಕಾಂಗ್ರೆಸ್ ಪಾಳೆಯದಲ್ಲಿ ಸಮಾಧಾನಕರ ವಾತಾವರಣ ಸೃಷ್ಟಿಗೆ ಕಾರಣವಾಗಿದೆ.