*ಹಿರಿಯ ನಾಗರೀಕರ ಆರೋಗ್ಯ ಅರಿವು ಕಾರ್ಯಕ್ರಮ*

*ಗಂಡಿಗಿಂತ ಹೆಣ್ಣು ಸೂಕ್ತ: ಶಾಸಕ ತುನ್ನೂರ್*

ಗಂಡು ಮಕ್ಕಳನ್ನು ಹಡಿಯುವುದಕ್ಕಿಂತ ಹೆಣ್ಣು ಮಕ್ಕಳನ್ನು ಹಡಿಯುವುದು ಸೂಕ್ತ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅಭಿಪ್ರಾಯ ಪಟ್ಟರು.

ನಗರದ ಬ್ಯಾಕ್ ವಾರ್ಡ್ ಮೈದಾನದಲ್ಲಿ ಶ್ರೀ ಸಾಯಿ ಶಿಕ್ಷಣ ಸಂಸ್ಥೆ (ರಿ), ಯಾದಗಿರಿ ಭಾರತೀಯ ವೈದ್ಯಕೀಯ ಸಂಘ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹಿರಿಯ ನಾಗರೀಕರಿಗೆ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದುದ್ದಕ್ಕೂ ಹೆತ್ತವರ ಸೇವೆ ಮಾಡುವುದು ಮಕ್ಕಳ ಜವಾಬ್ದಾರಿ. ಆದರೆ ಇಂದು ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವುದು ಮತ್ತು ಅವರ ವೃದ್ಧಾಪ್ಯದಲ್ಲಿ ಅವರನ್ನು ದೂರವಿಡುವುದು ಸಾಮಾನ್ಯ ಸಂಗತಿಯಾಗಿದೆ ಹೀಗಾಗಿ ಹಿರಿಯ ನಾಗರೀಕರಾದ ನಾವು ಮನೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಲ್ಲದೆ ಇಂದಿನ ದಿನಗಳಲ್ಲಿ ಗಂಡು ಮಕ್ಕಳಿಗೆ ನೀಡುವ ಹೆಚ್ಚು ಪ್ರಾಮುಖ್ಯತೆಯನ್ನು ಹೆಣ್ಣು ಮಕ್ಕಳಿಗೆ ನೀಡುತ್ತಿಲ್ಲ, ನಿಜವಾಗಲೂ ತಂದೆ ತಾಯಿಯರ ಮೇಲೆ ಇರುವ ಪ್ರೀತಿ ಪ್ರೇಮ ಹೆಣ್ಣು ಮಕ್ಕಳಿಗೆ, ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ಸವಾಲು ಸ್ವೀಕರಿಸಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ತನ್ನದೇ ಆದ ನೆಲೆ ಕಂಡುಕೊಂಡು ಧೈರ್ಯದಿಂದ ಮುನ್ನಡೆಯುತ್ತಿದ್ದಾಳೆ. ಇಂತಹ ಹೆಣ್ಣು ಮಕ್ಕಳನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಹೀಗಾಗಿ ಗಂಡು ಹೆಣ್ಣು ಎಂಬ ತಾತ್ಸಾರ ಮಾಡದೇ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಸಮಾನವಾದ ಹಕ್ಕು ನೀಡಬೇಕು ಎಂದು ಹೇಳಿದರು.

ನಂತರ ಡಾ. ಭಗವಂತ ಅನವಾರ ಮಾತನಾಡಿ ನಾವು ಪ್ರತಿ ವರ್ಷ ಆಗಸ್ಟ್ 21 ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸುತ್ತೇವೆ . ಈ ದಿನವನ್ನು ಎಲ್ಲಾ ಹಿರಿಯ ನಾಗರಿಕರಿಗೆ ಸಮರ್ಪಿಸಲಾಗಿದೆ. 21 ಆಗಸ್ಟ್ 1988 ರಂದು ಅಮೇರಿಕಾದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಹಿರಿಯ ನಾಗರಿಕರ ದಿನವನ್ನು ಪರಿಚಯಿಸಿದ ಕೀರ್ತಿ ರೊನಾಲ್ಡ್ ರೇಗನ್ ಅವರಿಗೆ ಸಲ್ಲುತ್ತದೆ ಎಂದರು.ಹಾಗೂ ಹಿರಿಯ ನಾಗರೀಕರಿಗೆ ಆರೋಗ್ಯ ಅರಿವು ಎಷ್ಟು ಮುಖ್ಯ ಎಂದು ತಿಳಿಸಿಕೊಟ್ಟರು.

ವಯಸ್ಸಾದ ಮೇಲೆ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು. ಸರ್ಕಾರ ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಹಿರಿಯರ ಆರೋಗ್ಯ ಕಾರ್ಡ್ ಏಕೆ ಅವಶ್ಯ ಎಂದು ಡಾ ಸಾಜೀದ್ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಡಾ. ವೀರಬಸವಂತರೆಡ್ಡಿ ಮುದ್ನಾಳ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ: ಭಗವಂತ ಅನವಾರ, ಡಿಎಸ್ಓ ಡಾ: ಎಂ ಎಸ್ ಪಾಟೀಲ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ಶರಣಪ್ಪ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಂಡೆಪ್ಪ ಆಕಳ ಹಾಗೂ ನಿವೃತ್ತ ಹಿರಿಯ ಪತ್ರಕರ್ತರಾದ ಸಿ. ಎಂ. ಪಟ್ಟೆದಾರ್ ಭಾಗವಹಿಸಿದ್ದರು.

ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲು ಬಂದಿದ್ದ ವೈದ್ಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಹಿರಿಯ ನಾಗರೀಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು, ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಜಿತ್ ರಾಜ್ ಜೈನ್ ವಹಿಸಿದ್ದರು. ಗಿರೀಶ್ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಶರಣಪ್ಪರವರು ವಂದಿಸಿದರು.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!