ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಿ- ಸಚಿವ ಶಿವರಾಜ್ ತಂಗಡಗಿ
—-
ಕೊಪ್ಪಳ ಜನವರಿ 04 (ಕರ್ನಾಟಕ ವಾರ್ತೆ): ದಕ್ಷಿಣ ಭಾರತದ ಕುಂಭ ಮೇಳ ಎಂದೇ ಪ್ರಸಿದ್ದವಾದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕುಡಿವ ನೀರು, ವಾಹನ ಪಾರ್ಕಿಂಗ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಕರೆದ ಪೂರ್ವಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಾಜ್ಯದ ವಿವಿಧ ಭಾಗಗಳಿಂದ ಲಕ್ಷ್ಯಾಂತರ ಭಕ್ತಾದಿಗಳು ಸೇರುವ ಶ್ರೀಗವಿಸಿದ್ದೇಶ್ವರ ಮಹಾರಥೋತ್ಸವ ಜನವರಿ 15ರಂದು ನಡೆಯಲಿದ್ದು, ಜಾತ್ರೆ ವ್ಯವಸ್ಥಿತವಾಗಿ ಜರುಗುವಂತೆ ನೋಡಿಕೊಳ್ಳಬೇಕು. ಮಹಾರಥೋತ್ಸದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಬೇಕು. ವಾಹನಗಳಿಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು. ರಥೋತ್ಸವ ವೇಳೆ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರೋತ್ಸವ ಹಿನ್ನೆಲೆಯಲ್ಲಿ ನಿರಂತರವಾಗಿ ನಡೆಯಲಿರುವ ದಾಸೋಹಕ್ಕೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಿರಲಿ. ಶುದ್ಧ ಕುಡಿಯುವ ನೀರು ಸರಬರಾಜು ಜೊತೆಗೆ ಸ್ವಚ್ಛತೆಯನ್ನು ಕಾಪಾಡಲು ನಗರಸಭೆಯಿಂದ ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯದ ಹಿತದೃಷ್ಟಿಯಿಂದ ಅಂಬ್ಯುಲೆಂನ್ಸ್ ವ್ಯವಸ್ಥೆ ಹಾಗೂ ಆರೋಗ್ಯ ತಂಡ ಕಾರ್ಯನಿರ್ವಹಿಸಬೇಕು. ಅಗ್ನಿಶಾಮಕ ವಾಹನಗಳನ್ನು ಕಾಯ್ದಿರಿಸಬೇಕು. ಶ್ರೀ ಗವಿಸಿದ್ದೇಶ್ವರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಹಾಗೂ ವ್ಯವಸ್ಥಿತವಾಗಿ ನಡೆಸಲು ರಚಿಸಲ್ಪಟ್ಟ ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇದು ನಮ್ಮೆಲ್ಲರ ಜಾತ್ರೆಯಾಗಿರುವುದರಿಂದ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ವಿಶೇಷಯವಾಗಿ ಜ. 14, 15 ಮತ್ತು 16 ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಈ ಮೂರು ದಿನಗಳ ಕಾಲ ಅಧಿಕಾರಿಗಳು ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್.ಎಲ್ ಅರಸಿದ್ದಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್ ಸೇರಿದಂತೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
*ಗವಿಮಠಕ್ಕೆ ಭೇಟಿ:* ಸಭೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಜಾತ್ರಾ ವಿಷಯದ ಕುರಿತು ಶ್ರೀಗಳೊಂದಿಗೆ ಚರ್ಚಿಸಿದರು. ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಡಿಸಿ ನಲಿನ್ ಅತುಲ್, ಸಿಇಓ ರಾಹುಲ್ ರತ್ನಂ ಪಾಂಡೇಯ ಹಾಗೂ ಇತರರ ಇದೇ ವೇಳೆ ಇದ್ದರು.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!