ದಿನ ಪತ್ರಿಕೆಗಳ ಸಂಪಾದಕರೊಂದಿಗೆ ಸಭೆ ನಡೆಸಿದ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ
ಬಾಗಲಕೋಟೆ: ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಉಳಿವು ಮತ್ತು ಬೆಳವಣಿಗೆಗಾಗಿ ಎಲ್ಲಾ ಸಂಪಾದಕರು ಸಂಘಟಿತರಾಗಬೇಕೆಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ ಎ.ಸಿ.ತಿಪ್ಪೇಸ್ವಾಮಿ ಪತ್ರಿಕೆಗಳ ಸಂಪಾದಕರಿಗೆ ಕರೆ ನೀಡಿದರು.
ಅವರು ಏಪ್ರಿಲ್ 5 ರಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸಂಪಾದಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಒಗ್ಗಟ್ಟಾಗಬೇಕಿದೆ. ಸರ್ಕಾರದ ಪ್ರತಿಯೊಂದು ಜನಪರ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಪತ್ರಿಕೆಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಸಂವಿಧಾನದ ನಾಲ್ಕನೇ ಅಂಗವೆಂದು ಹೇಳಲಾಗುವ ಪತ್ರಿಕಾ ರಂಗಕ್ಕೆ ಹೆಚ್ಚಿನ ಜಾಹೀರಾತು ನೀಡುವ ಮೂಲಕ ಸರ್ಕಾರ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಆಸರೆಯಾಗಬೇಕೆಂದು ಅವರು ಸರ್ಕಾರವನ್ನ ಆಗ್ರಹಿಸಿದರು.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಸರ್ಕಾರದ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತವೆ. ಆದರೆ ಹೆಚ್ಚಿನ ಜಾಹೀರಾತುಗಳನ್ನು ರಾಜ್ಯಮಟ್ಟದ ಪತ್ರಿಕೆಗಳಿಗೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಜಾಹೀರಾತು ಬಿಡುಗಡೆ ವಿಷಯದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲವೆಂದು ಹೇಳಿದ ಎ.ಸಿ.ತಿಪ್ಪೇಸ್ವಾಮಿ ಕಳೆದ ಒಂದು ವರ್ಷದಿಂದ ಜಾಹೀರಾತು ದರ ಹೆಚ್ಚಳ ಮಾಡದ ವಾರ್ತಾ ಇಲಾಖೆ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು. ಕೂಡಲೇ
ಶೇ.12 ರಷ್ಟು ಜಾಹೀರಾತು ದರವನ್ನು ಹೆಚ್ಚಳ ಮಾಡಬೇಕೆಂದು ವಾರ್ತಾ ಇಲಾಖೆ ಆಯುಕ್ತರಿಗೆ ಮನವಿ ಮಾಡಿದರು.
ಜನವರಿ 18 ರಂದು ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಘ ಮನವಿ ಪತ್ರ ಸಲ್ಲಿಸಿದೆ. ಮೀನಮೇಷ ಎಣಿಸದೇ ಕೂಡಲೇ ಇಲಾಖೆಯ ಆಯುಕ್ತರು ಕ್ರಮ ಕೈಗೊಳ್ಳಬೇಕು. ಪತ್ರಿಕೆಗಳ ಸಂಪಾದಕರ ಬಾಕಿ ಇರುವ ಕಡತಗಳನ್ನು ಇತ್ಯರ್ಥ ಮಾಡಬೇಕೆಂದರು.
ಸಕಾಲದಲ್ಲಿ ಕಡತಗಳ ಚಾಲನೆ ಮಾಡದ ವಾಣಿಜ್ಯ ಪ್ರಚಾರ ಶಾಖೆಯ ಅಧಿಕಾರಿ ಸಿಬ್ಬಂದಿಗಳ ವಿರುದ್ದ ಸರ್ಕಾರ ತಕ್ಷಣ ತನಿಖೆ ಮಾಡಿ ವಿಳಂಬಧೋರಣೆ ಅನುಸರಿಸಿದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಇಲಾಖೆ ಮತ್ತು ಸರ್ಕಾರವನ್ನ ಒತ್ತಾಯಿಸಿದರು.
ಸಂಪಾದಕರು ಒಟ್ಟಾಗಿ ಸರ್ಕಾರದ ಮುಂದೆ ಧ್ವನಿ ಎತ್ತಿದಾಗ ಮಾತ್ರ ನ್ಯಾಯಪಡೆಯಲು ಸಾಧ್ಯವಿದೆ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗೋಣ ಎಂದು ಸಂಪಾದಕರಿಗೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಗೇರಿ ಸಲಹೆ ನೀಡಿ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸಂಘದ ಜಿಲ್ಲಾ ಘಟಕ ರಚಿಸಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಗದಗದಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಮಾಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಗಲವಾಡ ಸಂಘದ ದೇಯೋದ್ದೇಶಗಳ ಕುರಿತು ಮಾತನಾಡಿದರು. ಸಭೆಯಲ್ಲಿ ಹಲವು ಸಂಪಾದಕರು ಜಿಲ್ಲಾ ಸಂಘ ರಚನೆ ಕುರಿತು ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು ನೀಡಿ ನಾವೆಲ್ಲರೂ ರಾಜ್ಯ ಸಂಘದ ಜೊತೆಗೆ ಸೇರುತ್ತೇವೆ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ರಾಜ್ಯ ಸಂಘದ ಕಾರ್ಯದರ್ಶಿ ಎಂ.ಬಿ. ಕೊಡಗಲಿ, ಜಂಟಿ ಕಾರ್ಯದರ್ಶಿ ವಿನಾಯಕ ಗರಸಂಗಿ , ಸಂಪಾದಕರಾದ ಈಶ್ವರ್ ಶೆಟ್ಟರ್, ಉಮೇಶ್ ಪೂಜಾರಿ, ಮಹೇಶ್ ಅಂಗಡಿ, ಸುಭಾಷ್ ಹುದ್ಲೂರ್, ವಿಠಲ್ ಬಲಕುಂದಿ, ಬಸವರಾಜ್ ನೀಲನಾಯಕ, ಶ್ರೀಕಾಂತ ನೀಲನಾಯಕ, ಜಗದೇಶ ಗಾಣಿಗೇರ, ಅರುಣ್ ಮುದಕವಿ, ಆನಂದ ದಲಬಂಜನ್, ಅರ್ಜುನ್ ಹೊಸಮನಿ, ತಿಪ್ಪಣ್ಣ ಚಲವಾದಿ, ಚಿದಾನಂದ, ಸತೀಶ್ ಹೀರೆಮನಿ,ಕಿರಣ್ ನಾರಾಯಣಿ, ಸಂತೋಷ ಕಳ್ಳಿಮನಿ, ರಾಜು ಮನ್ನಿಕೇರಿ, ವೀರೇಶ್ ನಲವತ್ತವಾಡ, ಶಾಲಗಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.