ಜಿಲ್ಲೆಯ ಶಾಸಕರ ವಿರುದ್ದ ಆಕ್ರೋಶ : ವೀಣಾ ವಿ.ಕಾಶಪ್ಪನವರ ಬಂಡಾಯದ ಕೂಗು
ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಆಗಿದ್ದ ವೀಣಾ ಕಾಶಪ್ಪನವರ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿಂದು ನಡೆದ ಕಾಂಗ್ರೆಸ್ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ
ಸೇರಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಸಚಿವ ಶಿವಾನಂದ ಪಾಟೀಲ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತ ಮೋಸದ ಆರೋಪ ಮಾಡಿ, ಕಾಂಗ್ರೆಸ್ ಟಿಕೆಟ್ ಸಿಗದೇ ಹೋದಲ್ಲಿ ಬಂಡಾಯ ಸ್ಪರ್ಧೆಗೆ ಸಜ್ಜಾಗುವಂತೆ ಒಕ್ಕೋರಲಿನ ಆಗ್ರಹ ಕೇಳಿ ಬಂದಿತು.
ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಶಾಸಕರ ಸ್ವಾರ್ಥ ರಾಜಕಾರಣದ ಫಲವಾಗಿ ವೀಣಾ ಕಾಶಪ್ಪನವರ ಇಂದು ಟಿಕೆಟ್ ವಂಚಿತರಾಗಿದ್ದಾರೆ. ಮೋಸ ಮಾಡಿದ ನೀವೆಲ್ಲ ಭವಿಷ್ಯದಲ್ಲಿ ಅವರಿಗಿಂತ ಹತ್ತು ಪಟ್ಟು ನೋವು ತಿನ್ನುತ್ತೀರಿ ಎನ್ನುವ ಆವೇಶ ಭರಿತ ಮಾತುಗಳನ್ನು ಕಾಶಪ್ಪನವರ ಅಭಿಮಾನಿಗಳು ವ್ಯಕ್ತ ಪಡಿಸಿದರು.
ಲೋಕಸಭೆ ಚುನಾವಣೆ ಹುಡುಗಾಟಿಕೆ ಚುನಾವಣೆ ಅಲ್ಲ. ಕಳೆದ ನಾಲ್ಕುವರೆ ವರ್ಷಗಳಿಂದ ಇಡೀ ಕ್ಷೇತ್ರ ಸುತ್ತಾಡಿ ಪಕ್ಷ ಸಂಘಟಿಸಿ, ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಗೆಲುವಿಗೂ ಕಾರಣರಾದ ವೀಣಾ ಕಾಶಪ್ಪನವರ ಪರವಾಗಿ ಏಕೆ ನಿಲ್ಲಲಿಲ್ಲ. ಅವರಿಗೆ ಏಕೆ ಮೋಸ ಮಾಡಿದಿರಿ ಎಂದು ಕಾರ್ಯಕರ್ತರು ಪ್ರಶ್ನಿಸಿದರು.
2018 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಯಾರೂ ಮುಂದೆ ಬಾರದೇ ಇದ್ದ ಸಮಯದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಲ್ಕು ಲಕ್ಷಕ್ಕೂ ಅಧಿಕ ಮತ ಗಳಿಸಿದ್ದರು.ಚುನಾವಣೆಯಲ್ಲಿ ಸೋತ ಬಳಿಕ ಒಂದು ದಿನವೂ ಮನೆಯಲ್ಲಿ ಕೂಡದೆ ಮಕ್ಕಳು, ಕುಟುಂಬಕ್ಕಿಂತ ಪಕ್ಷ ಸಂಘಟನೆಗೆ ದುಡಿದ ಕಾಶಪ್ಪನವರ ಲೋಕಸಭೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್ನುವುದು ಗೊತ್ತಿದ್ದೂ ಏಕೆ ಅವರ ಪರ ನಿಲ್ಲಲಿಲ್ಲ. ಯಾವ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಬೇರೆಯವರಿಗೆ ಟಿಕೆಟ್ ಕೊಡಿಸಿದಿರಿ. ನಿಮ್ಮ ಮನಸ್ಸಾದರೂ ಹೇಗೆ ಬಂತು. ಆತ್ಮ ಸಾಕ್ಷಿ ಎನ್ನುವುದು ನಿಮಗಿಲ್ಲವೇ ಎಂದು ಕಾರ್ಯಕರ್ತರು ಸಾಲು ಸಾಲು ಪ್ರಶ್ನೆಗಳ ಸುರಿಮಳೆಗರೆದರು.
ಇನ್ನೂ ಕಾಲ ಮಿಂಚಿಲ್ಲ ಜಿಲ್ಲೆಯಲ್ಲಿ ಪಕ್ಷವನ್ನು ಉಳಿಸಲು ಶಾಸಕರೆಲ್ಲ ಸೇರಿ ಟಿಕೆಟ್ ಕೊಡಿಸುವ ಕೆಲಸ ಮಾಡಬೇಕು. ಇಲ್ಲದೆ ಹೋದಲ್ಲಿ ಮೋಸ ಮಾಡಿದವರು ಭಸ್ಮವಾಗಲಿದ್ದಾರೆ ಎಂದು ಶಪಿಸಿದರು.
ಜಿಲ್ಲೆಯ ಶಾಸಕರು ಈಗಲಾದರೂ ಜಿಲ್ಲೆಯಲ್ಲಿನ ವಾಸ್ತವಿಕ ಸ್ಥಿತಿ ಏನು ಎನ್ನುವುದನ್ನು ಹೈಕಮಾಂಡಿಗೆ ವರದಿ ಸಲ್ಲಿಸಿ ಮನವರಿಕೆ ಮಾಡಬೇಕು. ಜತೆಗೆ ಕಾಶಪ್ಪನವರಿಗೆ ಏಕೆ ಟಿಕೆಟ್ ಕೊಡಲಿಲ್ಲ ಎನ್ನುವುದನ್ನು ಸ್ಪಷ್ಪ ಪಡಿಸಬೇಕು.
ಬೇರೆ ಜಿಲ್ಲೆಯವರನ್ನು ಏಕೆ ನಮ್ಮ ಮೇಲೆ ಹೇರಿದಿರಿ. ಜಿಲ್ಲೆಯ ಶಾಸಕರ ಇಂತ ನಡುವಳಿಕೆಗೆ ದೇವರೆ ಬುದ್ದಿ ಕಲಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ವೀಣಾ ಕಾಶಪ್ಪನವರ ಈ ಬಾರಿ ಪಕ್ಷದ ಅಭ್ಯರ್ಥಿ ಆಗಲಿ ಎನ್ನುವುದು ಬಹುತೇಕ ಕಾರ್ಯಕರ್ತರ ಆಶಯವಾಗಿತ್ತು.
ಕಾರ್ಯಕರ್ತರ ಆಶಯಕ್ಕೆ ನೀವು ನಿಮ್ಮ ಸ್ವಾರ್ಥಕ್ಕಾಗಿ
ತಣ್ಣೀರು ಎರಚಿದ್ದೀರಿ. ಆ ಮೂಲಕ ಕಾರ್ಯಕರ್ತರು ಕಣ್ಣಲ್ಲಿ ಕಣ್ಣೀರು ಬರಿಸಿದ್ದೀರಿ ಎನ್ನುವ ನೋವನ್ನು ವ್ಯಕ್ತಪಡಿಸಿದರು.
ದುಡುಕಿನ ನಿರ್ಧಾರ ಬೇಡ,ಇನ್ನೂ ಕಾಲ ಮಿಂಚಿಲ್ಲ, ಒಳ ರಾಜಕಾರಣ ಬಿಟ್ಟು, ಟಿಕೆಟ್ ಬದಲಾಯಿಸಿ, ಕಾಶಪ್ಪನವರಿಗೆ ಕೊಡಿಸುವ ಕೆಲಸ ಮಾಡುವ ಮೂಲಕ ಬಂಡಾಯಕ್ಕೆ ಅವಕಾಶ ಆಗದಂತೆ ಎಚ್ಚರಿಕೆ ವಹಿಸಿ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಗಿಟ್ಟಿಸುವಲ್ಲಿ
ಪ್ರಮುಖ ಪಾತ್ರ ವಹಿಸಿರುವ ಜವಳಿ ಸಚಿವ ಶಿವಾನಂದ ಪಾಟೀಲರ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ
ಕಾರ್ಯಕರ್ತರು, ನಿಮ್ಮ ಸ್ವಾರ್ಥಕ್ಕೆ ಕಾಶಪ್ಪನವರನ್ನು ಬಲಿ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಎಳ್ಳಷ್ಟೂ ಕೆಲಸ ಮಾಡದ, ಜಿಲ್ಲೆಯ ಜನತೆಗೆ ಪರಿಚಯವೇ ಇಲ್ಲದ ನಿಮ್ಮ ಮಗಳಿಗೆ ಟಿಕೆಟ್ ಕೊಡಿಸುವ ಬದಲಿಗೆ ಪಕ್ಷ ಸಂಘಟನೆಗಾಗಿ ಕೆಲಸ ಮಾಡಿರುವ ವೀಣಾ ಕಾಶಪ್ಪನವರಿಗೆ ಟಿಕೆಟ್ ಕೊಡಿಸುವ ಮೂಲಕ ದೊಡ್ಡತಮ ಮೆರೆಯುವ ಕೆಲಸ ಮಾಡಬೇಕಿತ್ತು. ಅದು ಬಿಟ್ಟು ಈ ರೀತಿ ಸ್ವಾರ್ಥ ಸಾಧನೆಗಾಗಿ ಪಕ್ಷಕ್ಕಾಗಿ ದುಡಿದವರಿಗೆ ಮೋಸ ಮಾಡಬಾರದಿತ್ತು ಎಂದರು.
ಇಡೀ ಸಭೆ ಮುಕ್ತಾಯ ಆಗುವವರೆಗೂ ಕಾಶಪ್ಪನವರಿಗೆ ಪಕ್ಷ ಟಿಕೆಟ್ ಕೊಡಬೇಕು, ಇಲ್ಲದಿದ್ದಲ್ಲಿ ಬಂಡಾಯವಾಗಿ ಕಣಕ್ಕಿಳಿಯಬೇಕು ಎನ್ನುವ ಕೂಗು ಆಗಾಗ್ಗೆ ಅನುಕರಣಿಸುತ್ತಲೇ ಇತ್ತು. ಕೊನೆಗೆ ಹುನಗುಂದ ಶಾಸಕ
ವಿಜಯಾನಂದ ಕಾಶಪ್ಪನವರ ಎರಡು ದಿನಗಳ ಕಾಲ ಕಾಯ್ದು ನೋಡೋಣ. ಬಳಿಕ ನಿಮ್ಮ ನಿರ್ಧಾರವೇ ನನ್ನ ನಿರ್ಧಾರ ಆಗಲಿದೆ.ಏನಿದ್ದರೂ ನನ್ನ ನಡೆ ಜನರ ಕಡೆ ಎಂದರು. ಕ್ಷೇತ್ರದಲ್ಲಿ ಬಂಡಾಯದ ಅಲೆಯಲ್ಲಿ ಅದರ ಲಾಭ ಪಡೆದುಕೊಳ್ಳುವರೋ, ಅದನ್ನು ಶಮನ ಮಾಡಿ ಪಕ್ಷದ ಬಾವುಟ ಹಾರಿಸುವರೋ ಕಾದು ನೋಡಬೇಕು